ಬೆಂಗಳೂರಿನ ಮೆಜೆಸ್ಟಿಕ್ನಲ್ಲಿ ಕೆಜಿ ಮುಖ್ಯರಸ್ತೆಯಲ್ಲಿ ನಡೆದು ಹೋಗುತ್ತಿದ್ದೆ,
ಒಬ್ಬ ಕನ್ನಡಕ ಮಾರುವಾತ ಎದುರುಗೊಂಡ, ನನ್ನ ಕುರಿತು
"ಸಾರ್, ಬರೀ ಎರಡು ರೂಪಾಯಿ" ತಗೊಳ್ಳಿ ಸಾರ್ ಎಂದ.
ನನಗೆ ಆಶ್ಚರ್ಯ, ಸಂತೋಷದಿಂದ "ಬರೀ ಎರಡು ರೂಪಾಯಿ ಮಾತ್ರಾನಾ...!!" ಎಂದೆ.
"ಹೌದು"
ನಾನು ಜೇಬಿನಿಂದ ಹಣ ತೆಗೆದು "ಚಿಲ್ಲರೆ ಇದೆಯಾ..?" ಎಂದು ಹಣ ಕೊಡಲು ಹೋದೆ.
"ಸ್ವಲ್ಪ ತಡೆಯಿರಿ ಸರ್, ಇದನ್ನು ಒಂದು ಸಾರಿ ಹೇಗೆ ಬಳಸುವುದು ಎಂದು ತೋರಿಸ್ತೀನಿ"
ಅಷ್ಟರಲ್ಲಿ ಮತ್ತೊಬ್ಬ ವ್ಯಕ್ತಿ ನನ್ನ ಹಾಗೆ ಅದನ್ನು ಕೊಳ್ಳುವ ಆಸೆಯಿಂದ ಅಲ್ಲಿಗೆ ಬಂದ.
ಕನ್ನಡಕ ಮಾರುವಾತ ಒಂದು ಕನ್ನಡಕವನ್ನು ನನಗೆ ಹಾಕಿದ.. ನಂತರ ಜೇಬಿನಿಂದ ಒಂದು ವೈಟ್ ಪೇಪರ್ ತೆರೆದು "ಇದು ಯಾವ ಕಲರ್..?" ಎಂದ.
ನಾನು "ಬಿಳಿ" ಎಂದೆ.
ಆತ "ಓಹ್, ಗುಡ್" ಎಂದು ಮತ್ತೊಂದು ಪೇಪರ್ ತೆಗೆದ, ಕೆಂಪೋ... ನೀಲಿಯೋ.. ಇರಬೇಕು ಮರೆತಿದ್ದೇನೆ.
"ಇದು ಯಾವ ಕಲರ್ ಸಾರ್"
ನಾನು ಸರಿಯುತ್ತರ ನೀಡಿದೆ.
ಆತ ಖುಷಿಯಿಂದ "ನೋಡಿ ಎಷ್ಟು ಚೆನ್ನಾಗಿ ವರ್ಕ್ ಆಗುತ್ತದೆ" ಎಂದ.
ನನಗೆ ಇಷ್ಟೆಲ್ಲಾ ಪರೀಕ್ಷೆ ಬೇಕಾಗಿರಲಿಲ್ಲ, ವಿತೌಟ್ ಎಕ್ಸಾಮ್ ನಾನು ಅವನು ಕೇಳಿದ ಬೆಲೆಗಿಂತ 5 ಪಟ್ಟು ಹೆಚ್ಚು ಕೊಡಲು ಸಿದ್ದನಿದ್ದೆ., ಹಾಗಾಗಿ ಅವಸರಿಸಿದೆ.
ಆತ ಅವಸರದಲ್ಲಿ ಇದ್ದಂತೆ ಕಾಣಲಿಲ್ಲ.., ಮತ್ತೊಬ್ಬ ವ್ಯಕ್ತಿ ಕೊಳ್ಳಲು ಬಂದವನು..., "ಬೆಲೆ ಎಷ್ಟು ಸರ್" ಎಂದ.
ಈತ ಕೂಲಾಗಿ.. "ಸಾರ್ ಇದು ಅಂಗಡಿಗಳಲ್ಲಿ 5000/- ಆಗುತ್ತದೆ, ನಾನೊಬ್ಬ ಕಳ್ಳ ಕದ್ದಿದ್ದೇನೆ, ನನಗೆ 2000/- ದ ಮೇಲೆ ರೂ.2/- ಲಾಭ ಕೊಡಿ " ಎಂದ.
ನನಗೆ ಈತನ ಮಾತುಗಳು ಏನೇನೂ ಅರ್ಥವಾಗಲಿಲ್ಲ..., ಆದರೆ ಮತ್ತೊಬ್ಬ ನನಗಿಂತ ಬಹಳ ಬುದ್ದಿವಂತ ಹಾಗಾಗಿ ನನಗಿಂತ ಬೇಗ ಅದರ ಬೆಲೆ Rs.2002/- ಎಂದು ಅರ್ಥ ಮಾಡಿಕೊಂಡ. ಕೂಡಲೇ "ನನಗೆ ಬೇಡ" ಎಂದ.
ಈತ ಅವನ ಹೊಟ್ಟೆಗೆ ಒಮ್ಮೆ ಗುದ್ದಿದ.., "ಬೇಡದಿದ್ದ ಮೇಲೆ, ಯಾಕೆ ಕೊಳ್ಳಲು ಬಂದೆಯೋ ಐವಾನ್.." ಎಂದು ಬೈಯುತ್ತಲೇ "ನಿನಗೆ ಎಷ್ಟಕ್ಕೆ ಬೇಕು...?" ಎಂದು ಕೇಳಿದ.
ನನಗೆ ಒಮ್ಮೆಲೆ ಶಾಕ್, ಇಷ್ಟೊತ್ತು ಒಬ್ಬ ವ್ಯಾಪಾರಿಯಂತೆ ಸಾರ್ ಸಾರ್ ಎನ್ನುತ್ತಿದ್ದವನು, ಡೆಮೋ ಸಹಾ ಕೊಟ್ಟವನು ಈಗ ಇದ್ದಕ್ಕಿದ್ದಂತೆ ರೌಡಿಯಾಗಿ ಬದಲಾಗಿದ್ದ.
ಈ ರೌಡಿ, ಆ ಇನ್ನೊಬ್ಬ ವ್ಯಕ್ತಿಗೆ "ಎಷ್ಟಕ್ಕೆ ಬೇಕೋ ಕೇಳೋ" ಎಂದು ಗದರಿದ.
ಅವನು "ಸಾರ್... ರೂ.800/- ಕ್ಕೆ ಕೊಡಿ" ಎಂದ.
"ಆ ಬೆಲೆಗೆ ಬರಲ್ಲಯ್ಯ.. ನೀನು ಹೋಗು" ಎಂದು ಹೇಳಿದ.
ನನಗೆ ಭಯ ಆಯಿತು, ಎದೆ ಹೊಡಕೊಳ್ತಿತ್ತು, ಗಂಟಲಿನ ತೇವ ಆರಿಹೋಗಿ, ಮಾತು ತೊದಲಲು ಶುರುವಾಯಿತು.
ನನ್ನ ಜೊತೆಗೆ ಇನ್ನೊಬ್ಬ ಗ್ರಾಹಕ ಇದ್ದದ್ದರಿಂದ ಸ್ವಲ್ಪ ಧೈರ್ಯ ಇತ್ತು.
ಈಗ ನನ್ನ ಕಡೆಗೆ ತಿರುಗಿ "ನಿನಗೆ ಎಷ್ಟಕ್ಕೆ ಬೇಕು" ಎಂದ.
ನಾನು ಸ್ವಲ್ಪ ಟ್ಯೂಬಲೈಟ್, ನನಗೆ ಈಗ ಇವರಿಬ್ಬರೂ ಪಾರ್ಟನರ್ಸ್ ಎಂದೂ... ಅರ್ಥವಾಯಿತು, ಅವನು ಎಂಟುನೂರಕ್ಕೇ ಕೇಳಿದ್ದು..., ಇವನು ಕೊಡಲ್ಲ ಎಂದಿದ್ದು..., ಎರಡೂ ನನಗೆ ಟೋಪಿ ಹಾಕಲು ಮಾಡಿದ ನಾಟಕ ಎಂದು ಸಹಾ ಗೊತ್ತಾಯಿತು.
ಈಗ ನನ್ನ ಸ್ಥಾನದಲ್ಲಿರುವ ಗ್ರಾಹಕ ಐನೂರಕ್ಕೋ ಎಂಟುನೂರಕ್ಕೋ ಕೇಳಿದರೆ, ಅವನು "ಕೊಡಲ್ಲ ಹೋಗು" ಅಂತಾನೆ, ಆಗ ನಾವು ಆರಾಮಾಗಿ ಇಲ್ಲಿಂದ ಹೋಗಬಹುದು ಎಂದು ಯೋಚಿಸುತ್ತಾನೆ.
ಆದರೆ ವಸ್ತು ಸ್ಥಿತಿ ಬೇರೆ ಇದ್ದು, ನಾವು ಕೇಳುವ ಬೆಲೆಗೆ ೫೦೦ ಅಥವಾ ೮೦೦ಕ್ಕೆ ಅವನು ಕೊಡಲು ರೆಡಿ ಇರ್ತಾನೆ, ಇನ್ನೊಬ್ಬನಿಗೆ ಕೊಡಲ್ಲ ಹೋಗು ಎಂದಿದ್ದು...ನಾನೂ ಸಹಾ ಅದೇ ಬೆಲೆಗೆ ಕೇಳಲಿ ಎಂಬ ದುರಾಲೋಚನೆಯಿಂದ.
ಮುನ್ನೆಚ್ಚರಿಕೆಯಿಂದ ನನ್ನ ಕೈಯನ್ನು ಸಹಾ ಹಿಡಿದುಕೊಂಡ.
ಈಗ ನಾನು ಕಮಿಟ್ ಆದರೆ ಅದನ್ನು ಕೊಳ್ಳಲೇಬೇಕಾಗುತ್ತದೆ.. ಎಂಬ ಅರಿವು ನನಗೆ ಬಂತು.
ಬೇಡ ಎಂದರೆ ಹೊಟ್ಟೆಗೆ ಗುದ್ದುತ್ತಾನೇನೋ ಎಂಬ ಭಯ ಇದ್ದುದರಿಂದ ನಾನು ಸ್ವಲ್ಪ ಹುಷಾರಾದೆ, "ನನ್ನ ಹತ್ತಿರ ಅಷ್ಟು ಹಣ ಇಲ್ಲ" ಎಂದೆ.
ಎಷ್ಟು ಇದೆ?
ನನಗೆ ಮತ್ತೊಮ್ಮೆ ಪೀಕಲಾಟಕ್ಕೆ ಬಂದಿತು, ಈಗ ಜೇಬಲ್ಲಿನ ಹಣ ಇವರು ಕಿತ್ತುಕೊಳ್ತಾರೆ ಅನ್ನೊದು ಖಾತ್ರಿಯಾಯಿತು.
ಬೇಡ ಎಂದರೆ ಏಟು, ಬೆಲೆಗೆ ಕೇಳಿದರೆ ಕೊಳ್ಳಬೇಕಾಗುತ್ತದೆ, ಈಗ ನನಗೆ ರೂ.2ಕ್ಕೆ ಕೇಳುವಷ್ಟು ಧೈರ್ಯ ಇರಲಿಲ್ಲ.
ಮನಸ್ಸಿನಲ್ಲಿಯೇ ಆಂಜನೇಯ, ಶನಿಮಹಾತ್ಮ, ಗಣಪತಿ ಎಲ್ಲಾ ದೇವರುಗಳಿಗೆ ಪ್ರಾರ್ಥಿಸಲಾರಂಭಿಸಿದೆ.
ಅವನು ನನ್ನ ಕೈ ಸ್ವಲ್ಪ ಲೂಸಾಗಿ ಹಿಡಿದುಕೊಂಡಿದ್ದ... ನಾನು ಒಮ್ಮೆ ಕೈ ಕೊಡವಿದವನು ಸಿಕ್ಕಿದ ಸಂದಿಯಲ್ಲಿ ಸತ್ತೆನೋ ಕೆಟ್ಟೆನೋ ಎಂದು ಓಡಿಹೋದೆ.
ಕಪಾಲಿ ಥಿಯೇಟರ್ ಸಿಕ್ಕಿತು, ಅಲ್ಲಿಂದ ಮತ್ತೊಂದು ಸಂದಿಯಲ್ಲಿ ತೂರಿ, ಇನ್ನೊಂದು ಸಂದಿಯಿಂದ ಹೊರಬಂದು ಆನಂದ ರಾವ್ ಸರ್ಕಲ್ ದಾಟಿ ಓಡಿಹೋದೆ.
ಪಿ.ಟಿ. ಉಷಾ ಮತ್ತು ಉಸೇನ್ ಬೋಲ್ಟ್ ಏನಾದರೂ ನನ್ನ ಓಟವನ್ನು ನೋಡಿದ್ದರೆ ಖಂಡಿತಾ ನಾಚಿಕೆಪಟ್ಟುಕೊಳ್ಳುತ್ತಿದ್ದರು... ಇವನ ಓಟದ ಮುಂದೆ ನಾವೇನು ಇಲ್ಲವೆಂದು.
ಇದು 2008 ರಲ್ಲಿ ನಾನು ಬೆಂಗಳೂರಿನ ಮೆಜೆಸ್ಟಿಕ್ನಲ್ಲಿ ಎದುರಿಸಿದ್ದ ಸತ್ಯ ಘಟನೆ.., ಇದರಲ್ಲಿ ಬರುವ ಪ್ರತಿಯೊಂದು ವಿವರವೂ ಅಕ್ಷರಶಃ ಸತ್ಯ.
ಬೆಂಗಳೂರಿಗೆ ಹೋಗುವ ಹೊಸಬರು ಫುಟ್‌ಫಾತ್, ರಸ್ತೆಗಳಲ್ಲಿ, ಸೊಂದಿಗಳಲ್ಲಿ ಏನನ್ನು ಕೊಳ್ಳಲು ಹೋಗಬೇಡಿ.
***
ಚೋರರಿಗೊಂದು ಕಾಲ ನನ್ನ ಪ್ರತಿಲಿಪಿ ಧಾರಾವಾಹಿಯಿಂದ ತೆಗೆದುಕೊಳ್ಳಲಾಗಿದೆ.
***
ಸ್ವತಃ ಅನುಭವ.
by
Maruthi Vardhan
ಮಾರುತಿವರ್ಧನ್.
No comments:
Post a Comment